ಸೋಮವಾರಪೇಟೆ
	ಭಾರತದ ಕರ್ನಾಟಕ ರಾಜ್ಯದ ಕೊಡಗು ಜಿಲ್ಲೆಯ ಒಂದು ತಾಲ್ಲೂಕು ಮತ್ತು ತಾಲ್ಲೂಕಿನ ಆಡಳಿತ ಕೇಂದ್ರ. ಉತ್ತರದಲ್ಲಿ ಹಾಸನ ಜಿಲ್ಲೆಯ ಸಕಲೇಶಪುರ, ಆಲೂರು ತಾಲ್ಲೂಕುಗಳೂ ಪಶ್ಚಿಮಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕೂ ಮತ್ತು ಮಡಿಕೇರಿ ತಾಲ್ಲೂಕೂ ದಕ್ಷಿಣ ಮತ್ತು ಆಗ್ನೇಯಕ್ಕೆ ವಿರಾಜಪೇಟೆ ತಾಲ್ಲೂಕೂ ಪೂರ್ವಕ್ಕೆ ಹಾಸನ ಜಿಲ್ಲೆಯ ಅರಕಲಗೂಡು ಮತ್ತು ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕುಗಳೂ ಸುತ್ತುವರಿದಿವೆ. ಶನಿವಾರಸಂತೆ, ಶುಂಠಿಕೊಪ್ಪ, ಸೋಮವಾರಪೇಟೆ ಮತ್ತು ಕುಶಾಲನಗರ, ಶಾಂತಳ್ಳಿ, ಕೊಡ್ಲಿಪೇಟೆ ಹೋಬಳಿಗಳು. 132 ಗ್ರಾಮಗಳಿರುವ ಈ ತಾಲ್ಲೂಕಿನ ವಿಸ್ತೀರ್ಣ 938.9 ಚ.ಕಿಮೀ. ಜನಸಂಖ್ಯೆ 2,05,981.

	ಕೊಡಗು ಜಿಲ್ಲೆಯ ಉತ್ತರ ಮತ್ತು ಪೂರ್ವದ ಕಡೆ ಇರುವ ಈ ತಾಲ್ಲೂಕಿನ ಹೆಚ್ಚು ಭಾಗ ಪ್ರಸ್ಥಭೂಮಿಯಿಂದ ಕೂಡಿದೆ. ಇಲ್ಲಿ ಹೆಚ್ಚು ಎತ್ತರವಾದ ಬೆಟ್ಟಗಳಿಲ್ಲ. ಮಡಿಕೇರಿಯ ದಕ್ಷಿಣದಲ್ಲಿ ಎರಡು ಕವಲುಗಳಾಗಿ ಒಡೆಯುವ ಬೇಂಗುನಾಡು ಶ್ರೇಣಿಯ ಒಂದು ಕವಲು ಡೊಂಕುಡೊಂಕಾಗಿ ಕುಶಾಲನಗರದ ಕಡೆಗೆ ಸಾಗಿದೆ. ಇದರ ಉನ್ನತ ಶಿಖರ ಕಲ್ಲೂರು ಬೆಟ್ಟ. ಕೋಟೆಬೆಟ್ಟದ ಉತ್ತರಕ್ಕಿರುವುವು ಸಂತೆಹಳ್ಳಿ ಬೆಟ್ಟಗಳು. ಮುಕ್ರಿಬೆಟ್ಟವೇ ಇವುಗಳ ಕೊನೆ. ಈ ತಾಲ್ಲೂಕಿನ ಬೆಟ್ಟಗಳು ಕಡಿದಾಗಿಲ್ಲ. ಇಲ್ಲಿ ನಡುನಡುವೆ ಹಸಿರು ಇಳಿಜಾರುಗಳೂ ದಟ್ಟ ಕಾಡುಗಳೂ ಇದ್ದು ಯುರೋಪಿನ ಭೂದೃಶ್ಯವನ್ನು ನೆನಪಿಗೆ ತರುತ್ತವೆಂದು ಹೇಳುವರು. ಕಲ್ಲೂರು ಬೆಟ್ಟದ ಕಾಡುಗಳಲ್ಲಿ ತೇಗದ ಮರ ಹೆಚ್ಚು. ಇಲ್ಲಿನ ಕಾಡುಗಳಲ್ಲಿ ಶ್ರೀಗಂಧ ಮುಂತಾದ ಬೆಲೆಬಾಳುವ ಮರಗಳು ಬೆಳೆಯುತ್ತವೆ. ತಾಲ್ಲೂಕಿನ ಪೂರ್ವಕ್ಕೆ ಬಯಲು ಪ್ರದೇಶ ಕಾಣುತ್ತದೆ. ವರ್ಷದಲ್ಲಿ ಹೆಚ್ಚುಕಾಲ ಹಸುರಾಗಿರುವ ಇಲ್ಲಿನ ಕಾಡುಗಳಲ್ಲಿ ವಿವಿಧ ಕಾಡು ಪ್ರಾಣಿಗಳನ್ನು ಕಾಣಬಹುದು. ತಂಪಾದ ಹವೆ ಇರುವ ಈ ತಾಲ್ಲೂಕಿನ ವಾರ್ಷಿಕ ಸರಾಸರಿ ಮಳೆ 2,301.10 ಮಿಮೀ.

	ಹೇಮಾವತಿ, ಕಾವೇರಿ ಮತ್ತು ಹಾರಂಗಿ ಈ ತಾಲ್ಲೂಕಿನ ನದಿಗಳು. ತಾಲ್ಲೂಕಿನ ಉತ್ತರದ ಗಡಿಯಂಚಿನಲ್ಲಿ ಪಶ್ಚಿಮದಿಂದ ಪೂರ್ವಾಭಿಮುಖ  ವಾಗಿ ಹರಿಯುವ ಹೇಮಾವತಿ ಈ ತಾಲ್ಲೂಕನ್ನು ಆಲೂರು ತಾಲ್ಲೂಕಿ ನಿಂದ ಬೇರ್ಪಡಿಸಿ ಮುಂದೆ ಹಾಸನ ಜಿಲ್ಲೆಯನ್ನು ಪ್ರವೇಶಿಸುವುದು. ಕಾವೇರಿ ನದಿಯು ದಕ್ಷಿಣದಿಂದ ಉತ್ತರಕ್ಕೆ ಈ ತಾಲ್ಲೂಕಿನ ಪೂರ್ವದ ಗಡಿಯಲ್ಲಿ ಹರಿದು ವಿರಾಜಪೇಟೆ, ಪಿರಿಯಾಪಟ್ಟಣ ತಾಲ್ಲೂಕುಗಳನ್ನು ಬೇರ್ಪಡಿಸಿದೆ. ಮಡಿಕೇರಿ ತಾಲ್ಲೂಕಿನಿಂದ ಹರಿದು ಬರುವ ಹಾರಂಗಿ, ಕಕ್ಕೆಹೊಳೆ, ಚೇರಹೊಳೆ, ಮಾದಾಪುರ ಹೊಳೆ ಮತ್ತು ಹಟ್ಟಿಹೊಳೆ ಉಪನದಿಗಳನ್ನು ಕೂಡಿಕೊಂಡು ಪೂರ್ವಾಭಿಮುಖ ಹರಿದು ಕುಶಾಲನಗರದ ಉತ್ತರಕ್ಕೆ ಕೂಡಿಗೆ ಬಳಿ ಕಾವೇರಿಯನ್ನು ಕೂಡಿಕೊಳ್ಳುತ್ತದೆ. ತಾಲ್ಲೂಕಿನಲ್ಲಿ ವ್ಯವಸಾಯಕ್ಕೆ ಉಪಯೋಗವಾಗಿರುವ ಮುಖ್ಯ ಕೆರೆಗಳಲ್ಲಿ ಹಲಗೋಟೆ ಬಳಿಯ ಹಲಗೋಟೆ ಕೆರೆ, ಸೋಮವಾರ ಪೇಟೆ ಬಳಿಯಲ್ಲಿರುವ ಹಳೆಯದಾದ ಹೊನ್ನಮ್ಮನ ಕೆರೆಗಳನ್ನು ಹೆಸರಿಸಬಹುದು. ಸೋಮವಾರಪೇಟೆ ಬಳಿ ಕಟ್ಟಿರುವ ಸೌತಿಹಳ್ಳ ಅಣೆಕಟ್ಟಿನಿಂದಲೂ ನೀರಾವರಿ ಸೌಕರ್ಯವನ್ನು ಪಡೆಯಲಾಗುತ್ತದೆ.

	ತಾಲ್ಲೂಕಿನಲ್ಲಿ ಕಪ್ಪು, ಕೆಂಪು ಜೇಡಿಮಿಶ್ರಿತ ಮಣ್ಣಿನ ಭೂಮಿಯಿದೆ. ಬೆಟ್ಟ ಕಣಿವೆ ಪ್ರದೇಶದಲ್ಲಿ ಕಾಫಿ, ಏಲಕ್ಕಿ ಮುಂತಾದ ತೋಟದ ಬೆಳೆಗಳಿಗೆ ಸೂಕ್ತವಾಗಿರುವ ಫಲವತ್ತಾದ ಕೆಂಪು ಜೇಡಿಮಣ್ಣಿನ ಭೂಪ್ರದೇಶವೂ ನದೀದಡಗಳಲ್ಲಿ ಮೆಕ್ಕಲುಮಣ್ಣಿನ ಹರಹೂ ಇದೆ. ವ್ಯವಸಾಯಪ್ರಧಾನವಾದ ಈ ತಾಲ್ಲೂಕಿನಲ್ಲಿ ಬತ್ತ, ಕಾಫಿ, ಏಲಕ್ಕಿ ಮತ್ತು ಕಿತ್ತಳೆ ಬೆಳೆಯುತ್ತಾರೆ.

	ಸೋಮವಾರಪೇಟೆ ಮತ್ತು ಕೂಡಿಗೆಗಳಲ್ಲಿ ಒಂದೊಂದು ವ್ಯವಸಾಯೋಪಕರಣಗಳ ಕಾರ್ಖಾನೆಯುಂಟು. ಕಾಫಿತೋಟಗಳಿಗೆ ಅವಶ್ಯವಾದ ಉಪಕರಣಗಳನ್ನು ಇಲ್ಲಿ ತಯಾರಿಸುತ್ತಾರೆ. ಶನಿವಾರಸಂತೆ ಮತ್ತು ಶಿರಂಗಾಲಗಳಲ್ಲಿ ಕೈಮಗ್ಗದ ಬಟ್ಟೆ ತಯಾರಾಗುತ್ತದೆ. ಕೂಡಿಗೆಯಲ್ಲಿ ಕಾಫಿ ಪರಿಷ್ಕರಣ ಕಾರ್ಖಾನೆಯುಂಟು. ಕೆಲವು ಅಕ್ಕಿ ಗಿರಣಿಗಳೂ ಈ ತಾಲ್ಲೂಕಿನಲ್ಲಿವೆ. ಜೇನುಸಾಕಣೆ, ಚಾಪೆ ತಯಾರಿಕೆ ಮುಂತಾದವುಗಳಿದ್ದು ಸಂಬಂಧಿಸಿದ ಸಹಕಾರ ಸಂಘಗಳೂ ಇವೆ.

	ಸೋಮವಾರಪೇಟೆಯ ವಾಯವ್ಯಕ್ಕೆ 6 ಕಿಮೀ ದೂರದಲ್ಲಿ ದೊಡ್ಡವೀರ ರಾಜೇಂದ್ರ ಒಡೆಯ (18ನೆಯ ಶತಮಾನ) ಸ್ಥಾಪಿಸಿದ ವೀರಶೈವ ಮಠವಿದೆ. ಇದನ್ನು ಅಬ್ಬಿಮಠವೆಂದು ಕರೆಯುತ್ತಾರೆ. ಇಲ್ಲಿ ಅನೇಕ ಪುರಾತನ ಓಲೆಗರಿ ಗ್ರಂಥಗಳು ಇವೆ. ಸೋಮವಾರ ಪೇಟೆಯ ಉತ್ತರಕ್ಕೆ 31 ಕಿಮೀ ದೂರದಲ್ಲಿರುವ ಕೊಡ್ಲಿಪೇಟೆ ಒಂದು ವ್ಯಾಪಾರ ಕೇಂದ್ರ ಮತ್ತು ಪಟ್ಟಣ. ಕುಶಾಲನಗರದ ಉತ್ತರಕ್ಕೆ 6 ಕಿಮೀ ದೂರದಲ್ಲಿರುವ ಕೂಡಿಗೆ ಕುಶಾಲನಗರ-ಸೋಮವಾರಪೇಟೆ ಮಾರ್ಗಮಧ್ಯದಲ್ಲಿದೆ. ಇಲ್ಲಿ ಮಾದರಿ ಪಶುಸಂಗೋಪನ ಮತ್ತು ವ್ಯವಸಾಯ ಕೇಂದ್ರವಿದೆ. ಸೋಮವಾರಪೇಟೆಯ ವಾಯವ್ಯಕ್ಕೆ 21 ಕಿಮೀ ದೂರದಲ್ಲಿರುವ ಕುಮಾರಹಳ್ಳಿಯಿಂದ ಸುಮಾರು 2 ಕಿಮೀ ದೂರದಲ್ಲಿ ಪುಷ್ಪಗಿರಿ ಅಥವಾ ಸುಬ್ರಹ್ಮಣ್ಯ ಬೆಟ್ಟವಿದೆ. ಬೆಟ್ಟದ ಮೇಲೆ ಈಶ್ವರ ದೇವಾಲಯ ವಿದ್ದು ತುಲಾಸಂಕ್ರಮಣದಂದು ವಿಶೇಷ ಪೂಜೆ ನಡೆಯುವುದು. ಸೋಮವಾರಪೇಟೆಯ ಆಗ್ನೇಯಕ್ಕೆ 28 ಕಿಮೀ ದೂರದಲ್ಲಿರುವ ಕುಶಾಲನಗರ ತಾಲ್ಲೂಕಿನ ಒಂದು ಮುಖ್ಯ ವ್ಯಾಪಾರ ಕೇಂದ್ರ ಮತ್ತು ಪಟ್ಟಣ. ಶನಿವಾರಸಂತೆಗೆ ಆಗ್ನೇಯದಲ್ಲಿ 6 ಕಿಮೀ ದೂರದಲ್ಲಿರುವ ಮಳ್ಳೂರಿನ ಜೈನಬಸದಿ ಪ್ರಸಿದ್ಧವಾದದ್ದು. ಇಲ್ಲಿರುವ 1058ಕ್ಕೆ ಸೇರಿದ ಶಾಸನದಲ್ಲಿ ಎರಡನೆಯ ರಾಜೇಂದ್ರ ಚೋಳ ಪೃಥ್ವಿ ಕೊಂಗಾಳ್ವ ಈ ಬಸದಿಗೆ ತೈಲವನ್ನೂ ಕೆಲವು ಗ್ರಾಮಗಳನ್ನೂ ತನ್ನ ತಾಯಿ ಪೋಚಬ್ಬರಸಿಯ ಜ್ಞಾಪಕಾರ್ಥ ನೀಡಿದನೆಂದು ತಿಳಿದುಬರುವುದು. ಸೋಮವಾರ ಪೇಟೆಯ ನೈಋತ್ಯಕ್ಕೆ ಸುಮಾರು 19 ಕಿಮೀ ದೂರದಲ್ಲಿರುವ ಮಾದಾಪುರದಲ್ಲಿ ಒಂದನೆಯ ಮತ್ತು ಎರಡನೆಯ ಲಿಂಗರಾಜೇಂದ್ರ ಒಡೆಯರ್ ಇವರ ಸಮಾಧಿಗಳು ನದಿ ದಡದಲ್ಲಿವೆ. ಹಿಂದೆ ಕೊಡಗಿನ ಹಾಲೇರಿ ರಾಜರು ಮಾದಾಪುರ ಮಠದಿಂದ ನದಿಯ ಆಚೆ ದಡದಲ್ಲಿದ್ದ ಗ್ರಾಮಕ್ಕೆ ಮೆರವಣಿಗೆ ಹೋಗುತ್ತಿದ್ದರು. ಆ ಮೆರವಣಿಗೆಯನ್ನು ಜಂಬೂಸವಾರಿ ಎಂದು ಕರೆಯುತ್ತಿದ್ದು ಈ ಊರಿಗೆ ಜಂಬೂರು ಎಂಬ ಹೆಸರು ಬಂದಿದೆ. ಕುಶಾಲನಗರಕ್ಕೆ ನೈಋತ್ಯದಲ್ಲಿ 13 ಕಿಮೀ ದೂರದಲ್ಲಿರುವ ನಂಜರಾಜಪಟ್ಟಣ ಸ್ವಲ್ಪಕಾಲ ಕೊಡಗಿನ ಚೆಂಗಾಳ್ವರ ರಾಜಧಾನಿಯಾಗಿತ್ತು. ಈ ಪಟ್ಟಣವನ್ನು ಪಿರಿಯಾಪಟ್ಟಣದ ದೊರೆ ನಂಜರಾಜ ಸ್ಥಾಪಿಸಿ ಆತ ಇಲ್ಲಿದ್ದ. ಇಲ್ಲೊಂದು ನಂಜುಡೇಶ್ವರ ದೇವಾಲಯವಿದೆ. ಕೂಡಿಗೆಯಿಂದ ಹಾಸನ ಜಿಲ್ಲೆಯ ಕೊಣನೂರಿಗೆ ಹೋಗುವ ಮಾರ್ಗದಲ್ಲಿ ಸಿಗುವ ರಾಮಸ್ವಾಮಿ ಕಣಿವೆಯಲ್ಲಿ ಪುರಾತನವಾದ ಪ್ರಸಿದ್ಧ ರಾಮಸ್ವಾಮಿ ದೇವಾಲಯವಿದೆ. ಸೋಮವಾರಪೇಟೆಯ ಉತ್ತರಕ್ಕೆ 20 ಕಿಮೀ ದೂರದಲ್ಲಿರುವ ಶನಿವಾರಸಂತೆ ಒಂದು ಹೋಬಳಿ ಮತ್ತು ವ್ಯಾಪಾರಕೇಂದ್ರ. ಇಲ್ಲಿನ ದನಗಳ ಜಾತ್ರೆ ಬಹು ಪ್ರಸಿದ್ಧ. ಸೋಮವಾರಪೇಟೆಯ ದಕ್ಷಿಣಕ್ಕೆ 28 ಕಿಮೀ ದೂರದಲ್ಲಿರುವ ಶುಂಠಿಕೊಪ್ಪ ಮಡಿಕೇರಿ-ಮೈಸೂರು ರಾಜ್ಯ ಹೆದ್ದಾರಿಯಲ್ಲಿರುವ ಒಂದು ಪಟ್ಟಣ ಮತ್ತು ವ್ಯಾಪಾರಕೇಂದ್ರ.                                    
      	*

	ಸೋಮವಾರಪೇಟೆ ಈ ತಾಲ್ಲೂಕಿನ ಆಡಳಿತ ಕೇಂದ್ರ ಹಾಗೂ ಪಟ್ಟಣ. ಮಡಿಕೇರಿಯ ಈಶಾನ್ಯಕ್ಕೆ 40 ಕಿಮೀ ದೂರದಲ್ಲಿ ಮಡಿಕೇರಿ-ಶನಿವಾರಸಂತೆ ಮಾರ್ಗಮಧ್ಯದಲ್ಲಿದೆ. ಜನಸಂಖ್ಯೆ 20,480.

	ಈ ಪಟ್ಟಣದ ಸುತ್ತಲೂ ಕಾಫಿ, ಏಲಕ್ಕಿ, ಕಿತ್ತಳೆ ತೋಟಗಳೂ ಬತ್ತದ ಗದ್ದೆಗಳೂ ವ್ಯಾಪಿಸಿವೆ. ಸುತ್ತಲ ಗ್ರಾಮಗಳಿಗೆ ಮುಖ್ಯ ವ್ಯಾಪಾರ ಕೇಂದ್ರವಾಗಿದ್ದು ಇಲ್ಲಿಂದ ಗ್ರಾಮ ಮತ್ತು ಸುತ್ತಲ ಪಟ್ಟಣಗಳಿಗೆ ರಸ್ತೆ ಸಂಪರ್ಕವಿದೆ. ಪ್ರತಿ ಸೋಮವಾರ ಇಲ್ಲಿ ಸಂತೆ ಸೇರುತ್ತಿದ್ದುದರಿಂದ ಸೋಮವಾರಪೇಟೆ ಎಂಬ ಹೆಸರು ಬಂದು, ಮುಂದೆ ಅದೇ ಪಟ್ಟಣ ಮತ್ತು ತಾಲ್ಲೂಕಿನ ಹೆಸರಾಗಿ ನಿಂತಿತೆಂದು ಪ್ರತೀತಿ.										
		(ಡಿ.ಎನ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ